ಒಂದೆಲಗ: ಅಂಬೆಲಿಫೆರಿ ಕುಟುಂಬದ ಸೆಂಟೆಲ ಜಾತಿಗೆ ಸೇರಿದ ಮೂವತ್ತುಮೂರು ಪ್ರಭೇದಗಳನ್ನುಳ್ಳ ಒಂದು ಸಸ್ಯಜಾತಿ. ಬ್ರಾಹ್ಮೀ, ತಿಮರೆ, ಇಲಿಕಿವಿಸೊಪ್ಪು ಪರ್ಯಾಯಪದಗಳು. ಉಷ್ಣವಲಯದ ತೇವವಾದ ಪ್ರದೇಶಗಳಲ್ಲಿ ಕಳೆಯ ರೂಪದಲ್ಲಿ ಬೆಳಯುವ ಈ ಜಾತಿಯ ಕೆಲವು ಪ್ರಭೇದಗಳು ಆಯುರ್ವೇದ ಔಷಧ ಪದ್ಧತಿಯಲ್ಲಿ ಪ್ರಾಮುಖ್ಯ ಗಳಿಸಿವೆ. ಅವುಗಳಲ್ಲಿ ಸೆಂಟೆಲ ಏಷಿಯಾಟಿಕ ಎಂಬ ಪ್ರಭೇದ ಭಾರತದ ಅದ್ಯಂತವೂ ಸ್ವಾಭಾವಿಕವಾಗಿ ಬೆಳೆಯುವ ಔಷಧಿ ಸಸ್ಯ. ನೆಲದ ಮೇಲೆ ಹಬ್ಬಿ ಕೊಂಡು ಬೆಳೆಯುತ್ತದೆ. ನವುರಾದ ವಾಸನೆಯುಂಟು. ಕಾಂಡ ನೆಲದ ಮೇಲೆಯೇ ಹಬ್ಬುವುದರಿಂದ ರೆಂಬೆಗಳು ಎಲೆಯ ಕಂಕುಳಲ್ಲಿ ಬರುತ್ತವೆ. ಉದ್ದವಾದ ತೊಟ್ಟಿರುವ, ಮೂತ್ರಪಿಂಡದಾಕಾರದ ಎಲೆಗಳು ಕಾಂಡ ಮತ್ತು ರೆಂಬೆಗಳ ಮೇಲೆ ಬೆಳೆಯುತ್ತವೆ. ಈ ಎಲೆಗಳ ಅಂಚು ಹಲ್ಲುಗಳಂತೆ ಒಡೆದಿದ್ದು ನಾಳರಚನೆ ಹಸ್ತಾಕಾರದಲ್ಲಿರುತ್ತದೆ. ಹೂಗೊಂಚಲು ಛತ್ರಿ (ಅಂಬೆಲ್) ಮಾದರಿಯದು; ಹೂಗಳಲ್ಲಿ 5 ಪುಷ್ಪಪತ್ರಗಳು, 5 ದಳಗಳು, 5 ಕೇಸರಗಳು ಇರುತ್ತವೆ; ದಳಗಳ ಮೇಲೆ ಕೇಸರಗಳು ಪರ್ಯಾಯವಾಗಿರುತ್ತವೆ; ಪರಾಗ ಕೋಶದಲ್ಲಿ ಎರಡು ಕೋಣೆಗಳಿ ರುತ್ತವೆ; ಅಂಡಾಶಯ ಅಧಮಸ್ಥಿತಿ ಯದು; ಫಲ ಸ್ಕೈಜೊóಕಾರ್ಪ್ ಮಾದರಿಯದು. ಭಾರತೀಯ ಔಷಧ ಪದ್ಧತಿಯಲ್ಲಿ ಇದನ್ನು ಉತ್ತೇಜನಕಾರಿಯಾಗಿಯಲ್ಲದೆ ಶಕ್ತಿವರ್ಧಕವಾಗಿಯೂ ಉಪಯೋಗಿಸುವುದುಂಟು. ಕಾಯಕಲ್ಪ ಚಿಕಿತ್ಸೆಯಲ್ಲಿ ಇದರ ಪಾತ್ರ ಪ್ರಮುಖವಾದುದು. ಭಾರತದಲ್ಲೂ ಮಡಗಾಸ್ಕರದಲ್ಲೂ ಇದರ ಕಷಾಯವನ್ನು ಕುಷ್ಠರೋಗ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.

ಈ ಸಸ್ಯದ ರಸದಲ್ಲಿ ಹಸುರು ಬಣ್ಣದ ಒಂದು ಬಗೆಯ ಸುಗಂಧದ ಎಣ್ಣೆ, ಟ್ಯಾನಿನ್, ಆಸ್ಕಾರ್ಬಿಕ್ ಆಮ್ಲ, ಪೆಕ್ಟಿಕ್ ಆಮ್ಲ, ರಾಳದಂತಿರುವ ವಸ್ತು-ಇವು ಇರುವುವೆಂದು ಕಂಡುಬಂದಿದೆ. ಇವುಗಳಲ್ಲೆಲ್ಲ ಏಷ್ಯಾಟಿಕೊಸೈಡ್ ಎಂಬ ವಸ್ತುವೇ ಕುಷ್ಠರೋಗ ಚಿಕಿತ್ಸೆಯಲ್ಲಿ ಪರಿಣಾಮಕಾರಿಯೆಂದು ಗೊತ್ತಾಗಿದೆ.

ಒಂದೆಲಗ ಔಷಧಿಗಳಲ್ಲಿ ಉಪಯುಕ್ತವೆನಿಸಿರುವಂತೆ ಮಾನವನ ಮತ್ತು ಪಶುಪ್ರಾಣಿಗಳ ಆಹಾರವಾಗಿಯೂ ಉಪಯೋಗವಾಗುತ್ತಿದೆ; ಇದರ ಎಲೆಯನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ತಂಬುಳಿ, ರಾಯತಗಳಿಗಿದು ಪ್ರಸಿದ್ಧ. ಈ ಸಸ್ಯದ ಹೂ ಮತ್ತು ಎಲೆಗಳು ಆಕರ್ಷಣೀಯವಾಗಿ ಕಾಣುವುದರಿಂದ ಒಂದೆಲಗವನ್ನು ಅಲಂಕಾರಸಸ್ಯವನ್ನಾಗಿಯೂ ಬೆಳೆಸುತ್ತಾರೆ. ಮಲಯದಲ್ಲಿ ಇದನ್ನು ತೋಟಗಳಲ್ಲಿ ಮಣ್ಣುಸವಕಲನ್ನು ತಡೆಗಟ್ಟಲು ಬೆಳೆಸುವರು.	(ಕೆ.ಬಿ.ಎಸ್.; ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ